ಬಾಸ್ಕಾಪ್ ತಲೆಬುರುಡೆ -
ಬುಷ್ ಮೆನ್ ಹಾಗೂ ಹಾಟೆನ್‍ಟಾಟ್ ಜನಾಂಗದ ಪೂರ್ವಜರು ಎನ್ನಲಾದ ಪಳೆಯುಳಿಕೆ ತಲೆಬುರುಡೆ. 1913ರಲ್ಲಿ ದಕ್ಷಿಣ ಆಫ್ರಿಕದ ಟ್ರಾನ್ಸ್ ವಾಲಿನ ಪೆಟ್ಜೆಫ್ ಸ್ಟ್ರೊಮ್ ಜಿಲ್ಲೆಯ ಬಾಸ್ಕಾಪ್ ಬಳಿಯ ಫಾರ್ಮ್ ಒಂದರಲ್ಲಿ ಕೂಲಿಕಾರರು ಅಗೆಯುತ್ತಿದ್ದಾಗ ಇದು ಕಂಡುಬಂದಿತು. ಸ್ವಲ್ಪಕಾಲಾನಂತರದ ಅಲ್ಲಿಗೆ ಭೇಟಿಕೊಟ್ಟು ಪರಿಶೋಧಕರಿಗೆ ತಲೆಬುರುಡೆ ದೊರೆತ ನಿರ್ದಿಷ್ಟ ಜಾಗ ಯಾವುದೆಂಬುದು ಪತ್ತೆಯಾಗಲಿಲ್ಲ. ಭೂಮಿಯಿಂದ ಸುಮಾರು 120 ಸೆಂಮೀ ಆಳದಲ್ಲಿ ಲ್ಯಾಟ್‍ರೈಟ್ ಶಿಲಾಸಂಚಯದಲ್ಲಿ ಅದು ದೊರಕಿದ್ದಿರಬೇಕೆಂದು ಊಹಿಸಲಾಯಿತು. ಈ ತಲೆಬುರುಡೆ ಸಮಾಧಿಯೊಂದರಲ್ಲಿತ್ತೇ ಇಲ್ಲವೇ ಒಂಟಿಯಾಗಿ ದೊರಕಿತೇ ಎಂಬುದೂ ತಿಳಿಯದು. ಇದು ದೊರೆತ ನಿವೇಶನ ಮೂಯಿ ನದಿಯಿಂದ 76 ಮೀ ದೂರದಲ್ಲಿ ಮತ್ತು ನದೀಮಟ್ಟದಿಂದ 3.66 ಮೀ ಎತ್ತರದಲ್ಲಿದೆ. 

	ಬಾಸ್ಕಾಪ್ ತಲೆಬುರುಡೆ ಪೂರ್ಣಪ್ರಮಾಣದಲ್ಲಿ ಲಭಿಸಿಲ್ಲ. ತಲೆಯ ಚಿಪ್ಪು, ಬಲಕಪೋಲಾಸ್ಥಿಯ ಭಾಗ ಮತ್ತು ಕೆಳದವಡೆಯ ವಾಮಾರ್ಧ ಭಾಗಗಳು ಮಾತ್ರ ದೊರೆತಿವೆ. ಈ ಮೂಳೆಗಳ ಅಚ್ಚುಗಳು ಲಂಡನ್ನಿನ ಬ್ರಿಟಿಷ್ ವಸ್ತುಸಂಗ್ರಹಾಲಯದಲ್ಲಿ (ಪ್ರಾಕೃತಿಕ ಇತಿಹಾಸ) ಕಾಣಸಿಗುತ್ತವೆ. ಹೋಮೋ ಸೇಪಿಯನ್ ವರ್ಗಕ್ಕೆ ಸೇರಿದ ಇದರ ಮಿದುಳುಕೋಶ ಇಂದಿನ ಪ್ರಮಾಣಕ್ಕೆ ಹೋಲಿಸಿದರೆ ದೊಡ್ಡದು. ಮಿದುಳುಕೋಶದ ಗಾತ್ರ ಕೂಡ ಈಗಿನ 1350 ಸಿಸಿಗೆ ಬದಲಾಗಿ 1800 ಸಿಸಿ ಎನ್ನಲಾಗಿದೆ.

	ಈ ತಲೆಬುರಡೆಯನ್ನು ಮೇಲಿನಿಂದ ನೋಡಿದಾಗ ಪಂಚಕೋನಾಕಾರದಲ್ಲಿ ಕಂಡುಬರುವುದು ಒಂದು ವಿಶಿಷ್ಟ ಲಕ್ಷಣ. ಹುಬ್ಬಿನ ಏಣುಗಳು ಪ್ರಧಾನವಾಗಿಲ್ಲ. ಹಣೆಯ ಮೂಳೆ ಕಿರಿದಾಗಿದೆ. (ಕನಿಷ್ಟ ಅಗಲ 102 ಮಿಮೀ). ಶಿರೋಭಾಗದ ದಪ್ಪ 6 ರಿಂದ 13 ಮಿಮೀ, ಉದ್ದ 205 ಮಿಮೀ ಹಾಗೂ ಅಗಲ 150 ಮಿಮೀ.

	ಈ ತಲೆಬುರುಡೆಯನ್ನು ಬೇರ ಬೇರೆ ಹೆಸರುಗಳಿಂದ ಕರೆಯಲಾಯಿತಾದರೂ ಆರ್ ಸಿಂಗರ್ ಎನ್ನುವವರು ಇದು ಬುಷ್‍ಮೆನ್ ಹಾಟೆನ್‍ಟಾಟ್ ಜನಾಂಗದ ಸ್ವರೂಪದ್ದೆಂಬುದನ್ನು ತೋರಿಸಿಕೊಟ್ಟರು. ಈಗ ಕಲಹರಿ ಮರುಭೂಮಿಯ ಭಾಗದಲ್ಲಿರುವ ಬುಷ್‍ಮೆನ್ನರ ಲಕ್ಷ್ಷಣಗಳನ್ನು ಇದು ಹೊಂದಿದೆ. ಆದರೆ ಇಂದಿನ ಬುಷ್ ಮೆನ್ನರು ಕುಬ್ಜರು ಮತ್ತು ಚಿಕ್ಕಮೆದುಳಿನಿಂದ ಕೂಡಿದವರಾಗಿದ್ದಾರೆ.

	ಬಾಸ್ಕಾಪ್ ತಲೆಬುರುಡೆಯೊಂದಿಗೆ ಲೆವಲಾಯ್ಸಿಯನ್ ತಂತ್ರ ಪರಂಪರೆಗೆ ಸೇರಿದ ಕಲ್ಲಿನ ಆಯುಧೋಪಕರಣಗಳು ಕಂಡುಬಂದುವು. ಇದರಿಂದ ಈ ತಲೆ ಬುರುಡೆ ದಕ್ಷಿಣ ಆಫ್ರಿಕದ ಮಧ್ಯಶಿಲಾಯುಗದ್ದೆಂಬುದು ವಿಧಿತವಾಗುತ್ತದೆ. ಈ ಕಾಲ ಯೂರೋಪಿನ ಮೇಲಣ ಪ್ರಾಚೀನಶಿಲಾಯುಗಕ್ಕೆ (ಅಪ್ಪರ್ ಪೇಲಿಯೋ ಲಿಥಿಕ್) ಸಂವಾದಿಯಾಗುತ್ತದೆ. 

	ಬುಷ್‍ಮೆನ್ನರ ಅನಿಶ್ಚಿತ ಉಗಮದ ಬಗೆಗೆ ಬೆಳಕು ಬೀರಬಹುದೆಂಬ ಕಾರಣದಿಂದಾಗಿ ಈ ತಲೆಬುರುಡೆ ಹೆಚ್ಚು ಗಮನ ಸೆಳೆದಿದೆ. ಸೂಡಾನಿನಲ್ಲಿ ದೊರೆತ ಪ್ರಾಗ್ ಬುಷ್‍ಮೆನ್ ಕಾಲದ ಸಿಂಗತಲೆಬುರುಡೆಯೊಂದಿಗೆ ಇದನ್ನು ಹೋಲಿಸಿದಾಗ ಆಸ್ಟ್ರೇಲಿಯದ ಮೂಲನಿವಾಸಿಗಳನ್ನು ಹೋಲುವ ಪ್ರಾಚೀನ ಮಾನವ ಬುಡಕಟ್ಟಿಗೆ ಅಂತಿಮವಾಗಿ ಬುಷ್‍ಮೆನ್ನರು ಸೇರಬಹುದೆಂಬ ಅಂಶ ವ್ಯಕ್ತವಾಗುತ್ತದೆ. 

	ಬುಷ್‍ಮೆನ್‍ರ ಹಾಗೂ ಎತ್ತರದ, ದೊಡ್ಡ ಮಿದುಳಿನ ಬಾಸ್ಕಾಪ್ ಜನರ ನಡುವಣ ಕಾಲದ ಬೆಳೆವಣಿಗೆಯ ವಿವಿಧ ಹಂತಗಳಲ್ಲಿಯ ಮಾನವ ಜೀವಿಗಳ ಬಗೆಗೆ ಹೆಚ್ಚಿನ ಅನ್ವೇಷಣೆಗಳಿಂದ ಸಾಕ್ಷ್ಯಾಧಾರ ಲಭಿಸೀತೆಂದು ಆಶಿಸಬಹುದು. 
		

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ
								(ಎಚ್.ಎಂ.ಎನ್.ಆರ್.)